Saturday, June 8, 2013

yaru tiliyaru ninna bujabalada parakrama

ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ
ಸಮರದೋಳ್ ಆರ್ಜಿಸಿದ ಆ ನಿನ್ನ ವಿಜಯಗಳ ಮರ್ಮ
ಎಲ್ಲದಕು ಕಾರಣನು ಶ್ರೀಕೃಷ್ಣ ಪರಮಾತ್ಮ
ಹಗಲಿರುಳು ನೆರಳಂತೆ ತಲೆ ಕಾಯ್ದು ಕಾಪಾಡಿ
ಜಯವ ತಂದಿತ್ತ ಆ ಯದುನಂದನ
ಅವನಿಲ್ಲದೆ ಬಂದ ನೀನು ತೄಣಕ್ಕೆ ಸಮಾನ

ಅರ್ಜುನ:
ಅಸಾಹಾಯ ಶೂರ ನಾ ಅಕ್ಷೀಣ ಬಲನೋ
ಹರನೊಡನೆ ಹೋರಾಡಿ ಪಾಶುಪತವಂ ಪಡೆದವನೋ
ಆಗ್ರಹದೊಳೆದುರಾಗೊ ಅರಿಗಳಂ ನಿಗ್ರಹಿಸೋ ವ್ಯಾಘ್ರನಿವನೋ
ಉಗ್ರಪ್ರತಾಪೀ

ಬಭ್ರುವಾಹನ:
ಓ ಹೊ ಒ ಹೋ ಉಗ್ರಪ್ರತಾಪಿ ಆ!
ಸಭೆಯೊಳಗೆ ದ್ರೌಪತಿಯ ಸೀರೆಯನು ಸೆಳೆವಾಗ ಎಲ್ಲಿ ಅಡಗಿತ್ತೋ ಈ ನಿನ್ನ ಶೌರ್ಯ
ನೂಪುರಂಗಳ ಕಟ್ಟಿ ನಟಿಸಿ ತಕಥೈಯಂದು ನಾಟ್ಯ ಕಲಿಸಿದ ನಪುಂಸಕ ನೀನು
ಚಕ್ರವ್ಯೂಹದೆ ನುಗ್ಗಿ ಛಲದಿಂದ ಛೇದಿಸದೆ ಮಗನನ್ನು ಬಲಿ ಕೊಟ್ಟ ಭ್ರಷ್ಟಾ ನೀನು
ಗಂಡುಗಲಿಗಳ ಗೆಲ್ಲೊ ಗುಂಡಿಗೆಯು ನಿನಗೆಲ್ಲೋ
ಖಂಡಿಸಿದೇ ಉಳಿಸುವೆ
ಹೋಗೊ ಹೋಗೆಲೋ ಶಿಖಂಡಿ

ಅರ್ಜುನ:
ಫಡ ಫಡ ಶಿಖಂಡಿಯಂದಡಿಗಡಿಗೆ ನುಡಿಯ ಬೇಡೆಲೋ ಮೂಢ
ಭಂಡರೆದೆ ಗುಂಡಿಗೆಯ ಖಂಡಿಸುತಾ ರಣಚಂಡಿಗೌತಣವೀವ ಈ ಗಾಂಡೀವಿ
ಗಂಡುಗಲಿಗಳ ಗಂಡ ಉದ್ಧಂಡ ಭೂಮಂಡಲದೊಳಖಂಡ ಕೀರ್ತಿ ಪ್ರಚಂಡ

ಬಭ್ರುವಾಹನ:
ಚಂಡನೋ ಪ್ರಚಂಡನೋ ಪುಂಡನೋ ನಿರ್ಧರಿಸುವುದು ರಣರಂಗ
ಊಡು ಬಾಣಗಳ ಮಾಡುವೆ ಮಾನಭಂಗ

ಅರ್ಜುನ:
ಕದನದೋಳ್ ಕಲಿಪಾರ್ಥನಂ ಕೆಣಕಿ ಉಳಿದವರಿಲ್ಲ

ಬಭ್ರುವಾಹನ:
ಅಬ್ಬರಿಸಿ ಭೊಬ್ಭಿರಿದರಿಲ್ಲಾರಿಗೂ ಭಯವಿಲ್ಲ

ಅರ್ಜುನ:
ಆರ್ಭಟಿಸಿ ಬರುತಿದೆ ನೋಡು ಅಂತಕನ ಆಹ್ವಾನ

ಬಭ್ರುವಾಹನ:
ಅಂತಕನಿಗೆ ಅಂತಕನು ಈ ಬಭ್ರುವಾಹನ

No comments:

Post a Comment